ಮಿಸಿಸಿಪಿ
ಅಮೆರಿಕ ಸಂಯುಕ್ತ ಸಂಸ್ಥಾನಗಳ ಒಂದು ರಾಜ್ಯ. ಆಗ್ನೇಯ ಭಾಗದಲ್ಲಿದೆ. ಉ. ಅ. 30013350 ಮತ್ತು ಪ.ರೇ. 88079104 ನಡುವೆ ಮೆಕ್ಸಿಕೊ ಕೊಲ್ಲಿಯ ತಗ್ಗಾದ ತೀರಪ್ರದೇಶದ ಬಯಲಿನಲ್ಲಿದೆ. ರಾಜ್ಯದ ಪಶ್ಚಿಮದ ಗಡಿಯಾಗಿ ಹರಿಯುವ ಮಿಸಿಸಿಪಿ ನದಿಯಿಂದ ಈ ಹೆಸರು ಬಂದಿದೆ. ಉತ್ತರದಲ್ಲಿ ಟೆನಸೀ, ದಕ್ಷಿಣದಲ್ಲಿ ಮೆಕ್ಸಿಕೊ ಕೊಲ್ಲಿ ಮತ್ತು ಲೂಸೀಯಾನಾ ಮತ್ತು 281-290 ಪೂರ್ವಕ್ಕೆ ಆಲಬಾಮಾ, ಪಶ್ಚಿಮದಲ್ಲಿ ಅರ್ಕನ್‍ಸಾ ಮತ್ತು ಲೂಸೀಯಾನ ರಾಜ್ಯಗಳು ಸುತ್ತುವರಿದಿವೆ.

	ಮಿಸಿಸಿಪಿ ತಗ್ಗು ಭೂಮಿ. ಸಮುದ್ರ ಪಾತಳಿಯಿಂದ ಸುಮಾರು 244 ಮೀಟರ್ ಎತ್ತರದಲ್ಲಿದೆ, ಅಷ್ಟೆ. ರಾಜ್ಯದ ಅತ್ಯುನ್ನತ ಬಿಂದು ಈಶಾನ್ಯದಲ್ಲಿ ? ಕೌಂಟಿಯಲ್ಲಿದೆ.  ಉತ್ತರ ದಕ್ಷಿಣವಾಗಿ 566 ಕಿಮೀ ಪೂರ್ವ ಪಶ್ಚಿಮವಾಗಿ 303ಕಿಮೀ ವ್ಯಾಪಿಸಿದೆ. ದಕ್ಷಿಣದಲ್ಲಿ 71 ಕಿಮೀ ಅಗಲದ ಸಮುದ್ರತೀರ ಪ್ರದೇಶವಿದೆ. ರಾಜ್ಯದ ವಿಸ್ತೀರ್ಣ 123,584 ಚಕಿಮೀ, ಜನಸಂಖ್ಯೆ 2,520,638 (1980). ರಾಜಧಾನಿ ಜಾಕ್ಸನ್, ಜನಸಂಖ್ಯೆ 202,895 (1980). 
ಮೆಕ್ಸಿಕೋ ಕೊಲ್ಲಿಯ ತೀರದ ಮಣ್ಣು ಕೃಷಿಗೆ ಅನುಕೂಲವಾಗಿಲ್ಲ. ಆದರೆ ಅಲ್ಲಿಂದ ಕೆಲವು ಮೀಟರ್ ದೂರದಲ್ಲಿರುವ ಒಳಪ್ರದೇಶದ ಮಣ್ಣು ತರಕಾರಿ ಬೆಳೆಗೆ ಅನುಕೂಲವಾಗಿದೆ. ರಾಜ್ಯದ ಪಶ್ಚಿಮಭಾಗದಲ್ಲಿ ಮೆಕ್ಕಲುಮಣ್ಣಿನ ದಿಣ್ಣಿಗಳಿವೆ. ಇವು ಸುಲಭವಾಗಿ ಸವೆಯುವ ಆದರೆ ಸರಿಯಾಗಿ ಸಾಗುವಳಿ ಮಾಡಿದಲ್ಲಿ ಹೆಚ್ಚು ಉತ್ಪನ್ನಕೊಡುವ ಮಣ್ಣಿನಿಂದಾದವು. ಇವುಗಳ ಪಶ್ಚಿಮ ಪ್ರದೇಶ ನೆರೆಮಣ್ಣಿನದು.  ಕೆಲವು ಅಣೆಕಟ್ಟುಗಳ ನೀರಾವರಿ ಸೌಕರ್ಯದಿಂದಾಗಿ ಹತ್ತಿ, ಹೈಬ್ರಿಡ್ ಕಾಳು ಮತ್ತು ಬತ್ತಗಳ ಉತ್ಪಾದನೆಗೆ ಪ್ರಸಿದ್ಧ. ಮೆಕ್ಕಲುದಿಣ್ಣೆ ಪ್ರದೇಶದ ಪೂರ್ವಕ್ಕೆ ಮತ್ತು ತೀರದ ಹುಲ್ಲುಗಾವಲುಗಳ  ಉತ್ತರಕ್ಕೆ ಪೈನ್ ಕಾಡುಗಳಿವೆ. ರಾಜ್ಯದ ದಕ್ಷಿಣಾರ್ಧದ ಹೆಚ್ಚು ಭಾಗವನ್ನು ಈ ಕಾಡುಗಳು ಆವರಿಸಿವೆ.

	ಈ ರಾಜ್ಯದಲ್ಲಿ ಐದು ಮುಖ್ಯ ನದಿಗಳೂ ಅನೇಕ ಹಳ್ಳಗಳೂ ಹರಿಯುತ್ತದೆ. ಈಶಾನ್ಯದಲ್ಲಿ ಟಾಂಬಿಗ್ಬೀ. ಆಗ್ನೇಯದಲ್ಲಿ ಲೀಫ್ ಮತ್ತು ಚಿಕಾಸೊವೆ ನದಿಗಳ ಸಂಗಮದಿಂದಾದ ಪಾಸ್ಕಗೂಲ ಮತ್ತು ದಕ್ಷಿಣ ಮಧ್ಯಪ್ರದೇಶದಲ್ಲಿ ಪರ್ಲ್‍ನದಿ ಹರಿಯುತ್ತವೆ. ಅನೇಕ ತೊರೆಗಳಿಂದಾದ ಯಜೂನದಿ ವಾಯವ್ಯದಲ್ಲಿ ಹರಿದು ವಿಕ್ಸ್‍ಬಗ್ ಹತ್ತಿರ ಮಿಸಿಸಿಪ್ಪಿ ನದಿಯನ್ನು ಸೇರುತ್ತದೆ. ಮಿಸಿಸಿಪ್ಪಿ ನದಿಯ ಉಪನದಿ ಬಗ್ ಬ್ಲ್ಯಾಕ್‍ನದಿ ಪಶ್ಚಿಮ ಮಧ್ಯಪ್ರದೇಶದಲ್ಲಿ ಹರಿಯುತ್ತದೆ. ಸಾರ್ಡಿಸ್, ಈನಿಡ್, ಅರ್ಕಬಟ್ಲಾ ಗ್ರೆನೆಡೆ, ಮೂನ್ ಮುಂತಾದ ಮಾನವ ನಿರ್ಮಿತ ಸರೋವರಗಳಿವೆ.

	ವಾಯುಗುಣ: ಮಿಸಿಸಿಪಿ ಬೆಚ್ಚನೆಯ ಹವಾಗುಣದಿಂದ ಕೂಡಿದೆ.  ರಾಜಧಾನಿ ಜಾಕ್‍ಸನ್‍ನಲ್ಲಿ ಉಷ್ಣತೆ ಜನವರಿಯಲ್ಲಿ 8.30ಅ ಇದ್ದರೆ ಜುಲೈನಲ್ಲಿ 27.80ಅ ಇರುತ್ತದೆ. ಕೆಲವು ಸಲ ರಾಜ್ಯದ ಸರಾಸರಿ ಉಷ್ಣತೆ 350ಅ ಮೀರುವುದುಂಟು. ಬೇಸಗೆಯ ಸರಾಸರಿ ಉಷ್ಣತೆ 26.70ಅ. ಚಳಿಗಾಲದ ಸರಾಸರಿ ಉಷ್ಣತೆ 8.90ಅ. ತೀರ ಕಡಿಮೆ ಮಳೆಬೀಳುವ ಶರತ್ಕಾಲದ ದಿನಗಳು ಸಾಮಾನ್ಯವಾಗಿ ಹೆಚ್ಚು ಹಿತಕರವಾಗಿರುತ್ತವೆ. ವರ್ಷದಲ್ಲಿ ಸರಾಸರಿ 130-165 ಸೆಂಮೀ ಮಳೆಯಾಗುತ್ತದೆ. ತೀರಪ್ರದೇಶಗಳಲ್ಲಿ ಜೂನಿನಿಂದ ಅಕ್ಟೋಬರ್ ತಿಂಗಳ ಮಧ್ಯದಲ್ಲಿ ಚಂಡಮಾರುತಗಳು ಬೀಸುವುದುಂಟು.

	ಸಸ್ಯ, ಪ್ರಾಣಿಜೀವನ:  ರಾಜ್ಯದ ಅರ್ಧಕ್ಕೂ ಹೆಚ್ಚು ಪ್ರದೇಶ ಅರಣ್ಯದಿಂದ ಕೂಡಿದೆ.  ಸೌಮ್ಯ ಹವಾಗುಣ, ದೀರ್ಘ ಫಸಲಿನ ಕಾಲ ಮತ್ತು ಸಾಕಷ್ಟು ಬೀಳುವ ಮಳೆ ಇವು ರಾಜ್ಯದ ಸಸ್ಯ ಮತ್ತು ಪ್ರಾಣಿ ಜೀವನದ ಮೇಲೆ ಗಮನಾರ್ಹ ಪ್ರಭಾವ ಬೀರಿವೆ. ದಕ್ಷಿಣದ ಕೌಂಟಿ ಪ್ರದೇಶಗಳಲ್ಲಿ ಲೈವ್, ಓಕ್ ಮತ್ತು ತಾಳೆ ಮರಗಳೂ ಉತ್ತರದಲ್ಲಿ ವಿವಿಧ ಹಣ್ಣಿನಮರ ಮತ್ತು ಗಟ್ಟಿ ಮರಗಳೂ ವಿಶೇಷವಾಗಿವೆ. ಪೈನ್ ವೃಕ್ಷ ಪ್ರದೇಶಗಳಲ್ಲಿ ಉದ್ದ ಎಲೆಯ ಪೈನ್ ಮುಖ್ಯ. ರಾಜ್ಯದಲ್ಲಿ ಕಂಡುಬರುವ ಇತರ ವೃಕ್ಷಗಳೆಂದರೆ ವಿಲೋ ಮತ್ತು ತುರಾಯಿಮರ. ಅಂಟನ್ನ ಒಸರುವ ಒಂದು ಬಗೆಯ ಮರವೂ ಇಲ್ಲಿದೆ. ಇವಲ್ಲದೆ ಬಿಳಿತೇಗ, ಹಿಕಂ, ಹನಿ ಲೋಕಸ್ಟ್, ಪಾಪ್ಲರ್, ಮೇಪಲ್, ಸೈಕಾ ಮೋರ್ ಮತ್ತು ಮ್ಯಾಗ್ನೋಲಿಯ ಮುಂತಾದವೂ ಕಾಡುಗಳಲ್ಲಿ ವಿವಿಧ ಹೂಗಳ ಮರ, ಸಸ್ಯ ಹಾಗೂ ಕುರಚಲು ಗಿಡಗಳೂ ಇವೆ. ಇವುಗಳಲ್ಲಿ ಮ್ಯಾಗ್ನೋಲಿಯ ಡಾಗ್‍ವುಡ್. ಕಿಡ್ ಬಡ್ ಮತ್ತು ಹನಿಸಕಲ್ ಸಾಮಾನ್ಯ. 1983ರಲ್ಲಿ ಅರಣ್ಯೋತ್ಪಾದನೆಯಿಂದ ಈ ರಾಜ್ಯಕ್ಕೆ 484 ಮಿಲಿಯನ್ ಡಾಲರುಗಳು ದೊರೆತಿದ್ದುವು. ಮಿತಿಯಿಲ್ಲದ ಬೇಟೆ ಮತ್ತು ಕೃಷಿ ಪ್ರದೇಶದ ವಿಸ್ತೀರ್ಣದಿಂದಾಗಿ ವನ್ಯಜೀವಿಗಳ ಸಂಖ್ಯೆ ಇಳಿಮುಖವಾಗಿದೆ. ತೋಳ ಮತ್ತು ಚಿರತೆ ನಿರ್ನಾಮವಾಗಿದ್ದರೆ, ಬಾಬ್‍ಕ್ಯಾಟ್ ಮತ್ತು ಕರಡಿ ತೀರ ವಿರಳವಾಗಿವೆ. ಚಿಗರೆಗಳು ಹೆಚ್ಚು ಕಂಡು ಬರುತ್ತಿವೆ. ಕಾಡು ಟರ್ಕಿ ತೋಳಗಳ ಸಂಖ್ಯೆ ಹೆಚ್ಚುತ್ತಿದೆ. ಅನೇಕ ಬಗೆಯ ಸ್ಥಳೀಯ ಮತ್ತು ವಲಸೆ ಹೋಗುವ ಪಕ್ಷಿಗಳು ಇಲ್ಲಿವೆ. ಸಿಹಿನೀರಿನಲ್ಲಿ ಕ್ಯಾಟ್‍ಫಿಶ್, ಬ್ರೀಮ್, ಬಾಸ್ ಸಿಗುತ್ತವೆ. ಕೊಲ್ಲಿಯಲ್ಲಿ ವಿಶೇಷವಾಗಿರುವ ಸೀಗಡಿ, ಸಿಂಪಿ ಮೀನುಗಳಿಂದಾಗಿ ದೊಡ್ಡ ಪ್ರಮಾಣದಲ್ಲಿ ವಾಣಿಜ್ಯ ಮೀನುಗಾರಿಕೆ ನಡೆಯುತ್ತದೆ.

	ಕೃಷಿ:  ರಾಜ್ಯದ ಬಹುಭಾಗ ಫಲವತ್ತಾದ ಮಣ್ಣಿನಿಂದ ಕೂಡಿದ್ದು ಕೃಷಿ ಜನರ ಮುಖ್ಯ ಕಸುಬಾಗಿದೆ. ಅಮೆರಿಕೆಯ ಹತ್ತಿ ಬೆಳೆಯುವ ನಾಲ್ಕುಮುಖ್ಯ ರಾಜ್ಯಗಳಲ್ಲಿ ಮಿಸಿಸಿಪಿ ಮೊದಲನೆಯದು.  ಮುಸುಕಿನ ಜೋಳ, ಸೋಯಾಬೀನ್, ಬತ್ತ. ಗೋಧಿ, ರೈ ಮತ್ತು ಜವೆ ಗೋಧಿ ಅಧಿಕ ಪ್ರಮಾಣದಲ್ಲಿ ಬೆಳೆಯುತ್ತವೆ.  ಮುಖ್ಯ ತರಕಾರಿ ಗೆಣಸಾದರೂ ಆಲೂಗೆಡ್ಡೆ, ಬಟಾಣಿ, ಅವರೆ ಮತ್ತು ಎಲ್ಲ ಭಗೆಯ ತರಕಾರಿ ಇಲ್ಲಿ ಬೆಳೆಯುತ್ತವೆ. ಪ್ಲಮ್, ಪೀಚ್, ಅಂಜೂರ ಮತ್ತು ಕಿತ್ತಳೆ ಹೇರಳವಾಗಿವೆ.  ಮತ್ಸ್ಯೋದ್ಯಮಕ್ಕೆ ಈ ರಾಜ್ಯ ಪ್ರಸಿದ್ಧ.  ಪ್ರತಿವರ್ಷ ಸುಮಾರು 15 ಮಿಲಿಯನ್ ಡಾಲರುಗಳು ಬೆಲೆಯ ಮೀನುಗಳನ್ನು ಹಿಡಿಯಲಾಗುತ್ತದೆ.  ವಿವಿಧ ಬಗೆಯ ಸೀಗಡಿಗಳಿಂದ ಪ್ರತಿವರ್ಷ ಸುಮಾರು 4 ಮಿಲಿಯನ್ ಡಾಲರುಗಳ ಗಳಿಕೆಯಿದೆ.

	ಕೈಗಾರಿಕೆ:  ಎರಡನೆಯ ಮಹಾಯುದ್ಧದ ಅನಂತರ ಉಡುಪುಗಳ ತಯಾರಿಕೆ ಇಲ್ಲಿಯ ಅತಿ ಶೀಘ್ರವಾಗಿ ಬೆಳೆಯುವ ಕೈಗಾರಿಕೆಯಾಯಿತು. ವಾಹನೋಪ ಕರಣಗಳ ತಯಾರಿಕೆ, ಆಹಾರಪದಾರ್ಥ ಸಂಸ್ಕರಣ, ಮರದ ಉತ್ಪಾದನೆಗಳು. ಬಟ್ಟೆ, ಕಡಲ ಆಹಾರ ಪದಾರ್ಥಗಳು ಮತ್ತು ರಾಸಾಯನಿಕಗಳು ಇತರ ಕೈಗಾರಿಕೆಗಳೂ 6 ತೈಲ ಶುದ್ಧೀಕರಣ ಕಾರ್ಖಾನೆಗಳೂ ಇಲ್ಲಿವೆ. 1983ರಲ್ಲಿ 2968 ಕಾರ್ಖಾನೆಗಳಿದ್ದು 204,821 ಮಂದಿ ಕಾರ್ಮಿಕರಿದ್ದರು. ಒಟ್ಟು ಗಳಿಕೆ 118,208,376 ಡಾಲರುಗಳು.

	ಖನಿಜ ಸಮಪತ್ತು:  ತೈಲ ಮತ್ತು ಅನಿಲಗಳು ಮುಖ್ಯವಾದವು. ಖನಿಜ ಇಂಧನಗಳ ಮೌಲ್ಯ ಎಲ್ಲ ಖನಿಜಗಳ ಉತ್ಪಾದಿತ ಮೌಲ್ಯದ 4ರಷ್ಟು ಆಗುತ್ತದೆ. 1981ರಲ್ಲಿ 34,381,093 ಬಿಲಿಯನ್ ಬ್ಯಾರಲ್ ಪೆಟ್ರೋಲಿಯಮ್ ಉತ್ಪಾದಿಸಲಾಗಿತ್ತು. 1981ರಲ್ಲಿ ಪೆಟ್ರೋಲಿಯಮ್ ಮತ್ತು ಅನಿಲದ ಮಾರಾಟದಿಂದ 1,807,670,550 ಡಾಲರುಗಳ ಗಳಿಕೆಯಾಗಿತ್ತು.

	ಜನ:  ಇಲ್ಲಿಯವರಲ್ಲಿ ಶೇಕಡಾ 98ಕ್ಕೂ ಹೆಚ್ಚು ಮಂದಿ ಬ್ರಿಟನ್, ಐರ್ಲೆಂಡ್ ಮತ್ತು ಉತ್ತರ ಯೂರೊಪಿನ ರಾಜ್ಯಗಳಿಂದ ಬಂದವರ ವಂಶಜರು.  ಕರಿಯರೆಲ್ಲರೂ ಹಳೆಯ ಬುಡಕಟ್ಟಿನವರು ಹಾಗೂ ಇಲ್ಲಿಯೇ ಜನಿಸಿ ಬೆಳೆದವರು. 1940ರ ತನಕ ಕರಿಯರು ಬಹುಸಂಖ್ಯಾತರಾಗಿದ್ದರು. 1970ರ ಸುಮಾರಿಗೆ ಅವರ ಸಂಖ್ಯೆ ಶೇಕಡಾ 37ಕ್ಕೆ ಇಳಿದಿತ್ತು.

	ಸಾರಿಗೆ: ಮಿಸಿಸಿಪಿ ನದಿ ಇಲ್ಲಿಯ ಸಾರಿಗೆಯ ಮುಖ್ಯ ನದೀ ಮಾರ್ಗಗಳಲ್ಲೊಂದಾಗಿದೆ. ಕಲ್ಲಿದ್ದಲು, ಉಕ್ಕು, ಕಾಳು, ವಾಹನಗಳು, ಸಕ್ಕರೆ ಮತ್ತು ಎಣ್ಣೆ ಇವು ನದಿ ಮಾರ್ಗವಾಗಿ ಸಾಗಿಸಲಾಗುವ ಮುಖ್ಯ ಸರಕುಗಳು. ಗ್ರೀನ್‍ವಿಲ್, ವಿಕ್ಸ್‍ಬರ್ಗ್ ಮತ್ತು ನಾಚಿಚ್ ಮುಖ್ಯನದಿ ಬಂದರುಗಳು. ಗಲ್ಟೊರ್ಟ್ ಮತ್ತು ಪಾಸ್ಕಗೂಲ ಬಂದರುಗಳಲ್ಲಿ ಸಾಗರ ಪ್ರಯಾಣದ ಹಡಗುಗಳು ನಿಲ್ಲಬಹುದಾಗಿದೆ. ಸಣ್ಣ ಪ್ರಮಾಣದ ಸಾಗರ ಪ್ರಯಾಣದ ಹಡಗುಗಳು ಮಿಸಿಸಿಪಿ ನದಿಯಲ್ಲಿ ನಾಚೆಜ್, ವಿಕ್ಸ್‍ಬರ್ಗ್ ಮತ್ತು ಗ್ರೀನ್‍ವಿಲ್‍ವರೆಗೆ ಹೋಗ ಬಹುದಾಗಿದೆ. ಹರಿಗೋಲುಗಳು ಮಿಸಿಸಿಪಿ ಪರ್ಲ್ ಮತ್ತು ಯಾಜೂ ನದಿಗಳಲ್ಲಿ ಸಂಚರಿಸುತ್ತವೆ. ರಾಜ್ಯದಲ್ಲಿ ಸುಮಾರು 16,486 (1984) ಕಿಮೀ ಉದ್ದದ ಹೆದ್ದಾರಿಯಿದೆ ಸುಮಾರು 4782 (1984) ಕಿಮೀ ಉದ್ದದ ರೈಲುಮಾರ್ಗವಿದೆ. ಸುಮಾರು 130 ವಿಮಾನ ನಿಲ್ದಾಣಗಳಿವೆ.  ಸುಮಾರು 130 ವಿಮಾನ ನಿಲ್ದಾಣಗಳಿವೆ.  ಒಟ್ಟಿನಲ್ಲಿ ಸಾರಿಗೆ ಸಂಪರ್ಕ ಉತ್ತಮ ಸ್ಥಿತಿಯಲ್ಲಿದೆ.

	ರಾಜ್ಯದಲ್ಲಿ 30 ದಿನಪತ್ರಿಕೆಗಳನ್ನೂ ಸೇರಿಸಿ ಒಟ್ಟು 140 ವಾರ್ತಾಪತ್ರಿಕೆಗಳಿವೆ. ಸುಮಾರು 140 ರೇಡಿಯೊ ಕೇಂದ್ರಗಳೂ 11 ದೂರ ದರ್ಶನ ಕೇಂದ್ರಗಳೂ ಇದ್ದು ಆಧುನಿಕವಾದ ಎಲ್ಲ ಬಗೆಯ ಸಂಪರ್ಕ ಸಾಧನಗಳನ್ನು ಹೊಂದಿದೆ.

	ಆಡಳಿತ:  ರಾಜ್ಯ ಸರ್ಕಾರ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳಿಂದ ಕೂಡಿದೆ. ಕಾರ್ಯಾಂಗದ ಇಲಾಖೆಗಳಲ್ಲಿ ಚುನಾಯಿತ ಮುಖ್ಯಸ್ಥರು ಇರುತ್ತಾರೆ. 122 ಸದಸ್ಯರ ಪ್ರತಿನಿಧಿಗಳ ಸಭೆ ಮತ್ತು 52 ಸದಸ್ಯರ ಸೆನೆಟ್‍ನ ದ್ವಿಸದನ ವಿಧಾನ ಮಂಡಲವಿದೆ. ಚುನಾಯಿತ ಅಧಿಕಾರಿಗಳ ಅವಧಿ 4 ವರ್ಷ. ರಾಜ್ಯದ ಕಾರ್ಯಾಂಗದ ಪ್ರಾಧಿಕಾರಿ ಗವರ್ನರ್, ಖಚಾಂಚಿ ಮತ್ತು ಸಾರ್ವಜನಿಕ ಲೆಕ್ಕಗಳ ಪರಿಶೋಧಕರು ತಮ್ಮ ಅವಧಿ ಮುಗಿದ ಒಡನೆಯೇ ಆ ಸ್ಥಾನಗಳಿಗೆ ಮತ್ತೆ ಬರುಂತಿಲ್ಲ. ಉಳಿದ ಚುನಾಯಿತ ಅಧಿಕಾರಿಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ.

	ಸರ್ವೋಚ್ಚ ನ್ಯಾಯಾಲಯವಿದೆ. ಛಾನ್ಸರಿ ಮತ್ತು ಸಂಚಾರೀ ನ್ಯಾಯಾಲಯಗಳಿಂದ ಸರ್ವೋಚ್ಚ ನ್ಯಾಯಾಲಯಕ್ಕೆ ನಿವೇದನೆಗಳು ಸಲ್ಲುತ್ತವೆ. ನ್ಯಾಯಾಧೀಶರ ಅವಧಿ 8 ವರ್ಷಗಳು.

	ಶಿಕ್ಷಣ:  ಶಿಕ್ಷಣ ಕ್ಷೇತ್ರದಲ್ಲಿ ಈ ರಾಜ್ಯಕ್ಕೆ ವಿಶಿಷ್ಟವಾದ ಇತಿಹಾಸವಿದೆ ಸಂಯುಕ್ತಸಂಸ್ಥಾನಗಳಲ್ಲಿ ಬಹುಶಃ ಮೊದಲನೆಯದಾದ ಸರ್ಕಾರಪೋಷಿತ ಸ್ತ್ರೀಯರಿಗೆ ಡಿಪ್ಲೊಮಾಗಳನ್ನು ನೀಡುವ ಸಂಸ್ಥೆ ಇಲ್ಲಿ 1884ರಲ್ಲಿ ಸ್ಥಾಪಿತವಾಯಿತು. ಇದಕ್ಕೆ ಹೊರತಾಗಿ ಇಲ್ಲಿ 18 ಜೂನಿಯರ್ ಕಾಲೇಜುಗಳು. 4 ವರ್ಷದ ಪದವಿ ನೀಡುವ 5 ಕಾಲೇಜುಗಳು, 3 ವಿಶ್ವವಿದ್ಯಾಲಯಗಳು, ಒಂದು ವೈದ್ಯಕೀಯ ಕೇಂದ್ರ ಹಾಗೂ ಗಲ್ಛ್ ಕೋಸ್ಟ್ ರೀಸರ್ಚ್ ಲ್ಯಾಬೊರೇಟರಿ ಮುಂತಾದವುಗಳಿದ್ದು ಶಿಕ್ಷಣ ಕ್ಷೇತ್ರದಲ್ಲೂ ಮುಂದುವರಿದ ರಾಜ್ಯವಾಗಿದೆ.

	ಇತಿಹಾಸ:  ಪ್ರಥಮದಲ್ಲಿ ಬಿಳಿಯರು ವ್ಯಾಪಾರದಲ್ಲಿ ಮತ್ತು ಇಂಡಿಯನ್ನರನ್ನು ಮತಾಂತರ ಗೊಳಿಸುವುದರಲ್ಲಿ ಆಸಕ್ತಿ ಹೊಂದಿದ್ದರು. ಆದರೆ ಮುಂದೆ ಅವರು ಇಲ್ಲಿಯೇ ಶಾಶ್ವತವಾಗಿ ನೆಲೆಸಲು ಉತ್ಸುಕರಾದಾಗ ಘರ್ಪಣೆಗಳು ಉಂಟಾಗ ತೊಡಗಿದುವು. 16ನೆಯ ಶತಮಾನದ ಪೂರ್ವಾರ್ಧದಲ್ಲಿ ಸ್ಪಾನಿಷರು ಮಿಸಿಸಿಪಿಯ ಪರಿಶೋಧನೆಗೆ ತೊಡಗಿದರು. 1540ರಲ್ಲಿ ಹರ್ನಾಂಡೊ ಡ ಸಾಟೋ ಮತ್ತು ಅವನ ಸಂಗಡಿಗರು ಈಗ ಕೊಲಂಬಸ್ ಇರುವಲ್ಲಿ ಮಿಸಿಸಿಪಿಯನ್ನು ಪ್ರವೇಶಿಸಿ ಪಾಂಟೋಟಾಕ್ ಬಳಿ ಚಳಿಗಾಲವನ್ನು ಕಳೆದರು. 1541 ಮೇ ತಿಂಗಳ 8ರಂದು ಅವರು ಮಿಸಿಸಿಪಿ ನದಿಯನ್ನು ಆವಿಷ್ಕರಿಸಿದರು. ಪ್ರಶಸ್ತ ಲೋಹಗಳ ಶೋಧನೆಯಲ್ಲಿ ವಿಫಲರಾದ ಸ್ಪಾನಿಷರು ಈ ಪ್ರದೇಶದಲ್ಲಿ ಆಸಕ್ತಿ ಕಳೆದುಕೊಂಡರು. ಮುಂದೆ 1673ರಲ್ಲಿ ಇಲ್ಲಿಗೆ ಬಂದವರೆ ಫ್ರೆಂಚ್ ಪಾದ್ರಿ ಫಾದರ್ ಜಾಕ್ವಿಸ್ ಮಾಕ್ರ್ವೆಟ್ ಮತ್ತು ವ್ಯಾಪಾರಿ ಲೂಯಿ ಜೂಲಿಯಟ್. ಅವರು ದಕ್ಷಿಣಕ್ಕೆ ಅರ್ಕನ್ಸಾಸ್‍ನದಿಯ ವರೆಗೆ ಮಿಸಿಸಿಪಿ ನದಿಯನ್ನು ಪರಿಶೋಧಿಸಿದರು. 1682ರಲ್ಲಿ ಲಾಸೆಲ್ಲಿ ಫ್ರಾನ್ಸಿನ ರಾಜ 14ನೆಯ ಲೂಯಿಯ ಅನುಮತಿ ಪಡೆದು ಮಿಸಿಸಿಪಿ ನದಿಯನ್ನು ಇಲಿನಾಯ್‍ನಿಂದ ಅದರ ಮುಖದವರೆಗೆ ಪರಿಶೋಧಿಸಿ ಆ ಪ್ರದೇಶವೆಲ್ಲ ಫ್ರಾನ್ಸಿನದೆಂದು ಸಾರಿ ತನ್ನ ರಾಜನ ಗೌರವಾರ್ಧ ಆ ಪ್ರದೇಶವನ್ನು ಲೂಯಿಸಿಯಾನಾ ಎಂದು ಕರೆದ.  1699ರಲ್ಲಿ ಓಪನ್ ಸ್ರಿಂಗ್ಸ್ ಹತ್ತಿರ ಪ್ರಥಮ ಫ್ರೆಂಚ್ ವಲಸೆ ಫೋರ್ಟ್ ಮಾರೆಪಾಸ್ ಸ್ಥಾಪಿತವಾಯಿತು. ಅಂದಿನಿಂದ 1763ರ ತನಕ ಮಿಸಿಸಿಪಿ ಫ್ರೆಂಚ್ ವಸಾಹತು ಲೂಯಿಸಿಯಾನಾದ ಭಾಗವಾಗಿತ್ತು. ಅವರು ಇದನ್ನು ಮೊಬೈಲ್, ಅನಂತರ ಬಿಲಾಕ್ಸಿ ಹಾಗೂ 1722ರ ಅನಂತರ ನ್ಯೂಅರ್ಲಿಯನ್ಸ್‍ನಿಂದ ಆಳಿದರು. ಎರಡನೆಯ ವಲಸೆ ಪೋರ್ಟ್ ರೋಸಾಲಿ (ನಾಚಿಚ್) 1716ರಲ್ಲಿ ಎದ್ದಿತು. ಇತರ ವಲಸೆಗಳು ಹಿಂಬಾಲಿಸಿದುವು. ಏಳು ವರ್ಷದ ಯುದ್ಧ ಮತ್ತು ಪ್ಯಾರಿಸಿನ ಒಪ್ಪಂದ (1763) ಇವುಗಳ ಪರಿಣಾಮವಾಗಿ ಈ ಪ್ರದೇಶ ಪಶ್ಚಿಮ ಫ್ಲಾರಿಡಾ ಎಂಬ ಹೆಸರಿನಿಂದ ಬ್ರಿಟಿಷರ ಸ್ವಾಧೀನಕ್ಕೆ ಬಂತು. ಪೆನ್ಸಕೊಲ ಪಶ್ಚಿಮ ಫ್ಲಾರಿಡಾದ ರಾಜಧಾನಿಯಾಗಿತ್ತಾದರೂ ಮೊಬೈಲ್ ಮುಖ್ಯ ನೆಲೆಯಾಗಿತ್ತು. ಬ್ರಿಟಿಷರ ಆಳ್ವಿಕೆಯಲ್ಲಿ ಪಶ್ಚಿಮ ಫ್ಲಾರಿಡ ಅಭಿವೃದ್ಧಿಯಾಯಿತು. ಅಮೆರಿಕ ಕ್ರಾಂತಿಯ ಸಮಯದಲ್ಲಿ ಸ್ಪೇನ್ ಇದರ ಕೆಲಭಾಗವನ್ನು ಆಕ್ರಮಿಸಿಕೊಂಡು ಕ್ರಾಂತಿಯ ಅನಂತರವೂ ಅಮೆರಿಕ ಸಂಯುಕ್ತ ಸಂಸ್ಥಾನಗಳಿಗೆ ಅದನ್ನು ಬಿಟ್ಟು ಕೊಡಲು ಒಪ್ಪಲಿಲ್ಲ. 1795ರಲ್ಲಿ ಸಂಯುಕ್ತ ಸಂಸ್ಥಾನ ಮತ್ತು ಸ್ಪೇನುಗಳ ನಡುವೆ ಆದ ಒಪ್ಪಂದದ ಅನಂತರವೇ ಸ್ಪೇನ್ ತಾನು ಆಕ್ರಮಿಸಿಕೊಂಡಿದ್ದ ಪ್ರದೇಶವನ್ನು ಬಿಟ್ಟುಕೊಟ್ಟಿತು. 1798ರಲ್ಲಿ ಸಂಘಟಿತವಾದ ಮಿಸಿಸಿಪಿ ರಾಜ್ಯಕ್ಕೆ ಪೂರ್ವದಿಂದ ಪಶ್ಚಿಮಕ್ಕೆ ಚಟಹೂಚೀ ಮತ್ತು ಮಿಸಿಸಿಪಿ ನದಿಗಳ ನಡುವಣ ಹಾಗೂ ಉತ್ತರದಿಂದ ದಕ್ಷಿಣಕ್ಕೆ 320 28' ನಿಂದ 310 ಅಕ್ಷಾಂಶಗಳ ನಡುವಣ ಪ್ರದೇಶ ಸೇರಿತ್ತು. ಮುಂದೆ ಇಂಡಿಯನ್ನರೊಡನೆ ಅಮೆರಿಕ ಸಂಯುಕ್ತ ಸಂಸ್ಥಾನ ಅನೇಕ ಒಪ್ಪಂದಗಳನ್ನು ಮಾಡಿ ಕೊಂಡಿತು. 1840ರ ಸುಮಾರಿಗೆ ಮಿಸಿಸಿಪಿಯಲ್ಲಿ 60ಕೌಂಟಿಗಳಿದ್ದುವು. ಇಡೀರಾಜ್ಯ ಬಿಳಿನೆಲಸಿಗರ ಕೈವಶವಾಗಿತ್ತು. 1812ರ ಸುಮಾರಿಗೆ ರಾಜ್ಯದ ವಿಸ್ತೀರ್ಣ ಹೆಚ್ಚಿ ಅದು ಟೆನಸೀಯಿಂದ ಮೆಕ್ಸಿಕೊಕೊಲ್ಲಿಯವರೆಗೆ ಹಬ್ಬಿತ್ತು.  ಮುಂದೆ ಇದರ ಪೂರ್ವದ ಭಾಗ ಅಲಬಾಮಾ ರಾಜ್ಯವಾಯಿತು.  ಇದರ ಪಶ್ಚಿಮ ಭಾಗವಷ್ಟೇ ಮಿಸಿಸಿಪಿ ರಾಜ್ಯವಾಗಿ ಸಂಯುಕ್ತ ಸಂಸ್ಥಾನದ 20ನೆಯ ರಾಜ್ಯವಾಗಿ ಸೇರಿತು (1817).
(ಜಿ.ಕೆಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ